ಕೃಷಿ, ಮಾವು ಮತ್ತು ಸಂಘಟನೆ

“ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬುದು ಸಂಸ್ಕೃತ ಸುಭಾಷಿತವಾಗಿದ್ದು, ಕೃಷಿಯನ್ನು ನಂಬಿ ಬದುಕುವವನಿಗೆ ಎಂದೂ ಹಸಿವು, ಬರಗಾಲ ಕಾಡುವುದಿಲ್ಲ ಎಂದು ಅರ್ಥ ಕೊಡುತ್ತದೆ..

ಜೀವ ವಿಕಾಸದಲ್ಲಿ ಕೃಷಿಕ್ರಾಂತಿ ಮಹತ್ತರ ಘಟ್ಟ.. ಗುಂಪು ಕಟ್ಟಿಕೊಂಡು ಬೇಟೆಯಾಡಿ ಸಿಕ್ಕ ಪ್ರಾಣಿ ಪಕ್ಷಿಗಳ ಮಾಂಸ ತಿಂದು ಜೀವಿಸುತ್ತಿದ್ದ ಮಾನವ ಒಂದೆಡೆ ನೆಲೆ ನಿಂತು ಕೃಷಿ ಮಾಡಲು ಕಲಿತದ್ದೇ ಕೌತುಕದ ವಿಷಯ.. ಈಗ್ಗೆ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಕೃಷಿ ಮಾಡಲು ಕಲಿತ ಎಂದು ಅಂದಾಜಿದೆ.

ಆರಂಭದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದ್ದ ಕೃಷಿಯು, ನಾಗರಿಕತೆ ಬೆಳೆದಂತೆ ಅನೇಕ ಬದಲಾವಣೆಗಳನ್ನು ಕoಡು ಇಂದು ಉದ್ಯಮವಾಗಿ ರೂಪಾಂತರಗೊಂಡಿದ್ದು ಒಂದು ವಿಸ್ಮಯ..

ವೈಜ್ಞಾನಿಕ ಆವಿಷ್ಕಾರ, ಔದ್ಯೋಗಿಕ ಕ್ರಾಂತಿಗಳ ಹೊರತಾಗಿಯೂ ಮಾನವ ಕುಲ ಮತ್ತು ಕೃಷಿಗಳ ಅವಿನಾಭಾವ ಸಂಬಂಧ ಜತನವಾಗುಳಿದಿದೆ. ಆಧುನಿಕತೆಯ ಭರಾಟೆಗೆ ಸಿಕ್ಕು ಎಷ್ಟೇ ನಲುಗಿದರೂ ಕೃಷಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಮಾನವನ ಅಸ್ತಿತ್ವಕ್ಕೆ ಮೂಲಾಧಾರ ಕೃಷಿಯೇ ಆಗಿದ್ದು, ಅದಿಲ್ಲದ ಜೀವನವನ್ನು ಊಹಿಸಿಕೊಳ್ಳುವದು ಕಷ್ಟ.

ಪ್ರತಿಯೊಂದು ದೇಶದ ಅಭಿವೃದ್ದಿಯಲ್ಲಿ ಕೃಷಿಯ ಕೊಡುಗೆ ಮಹತ್ತರವಾಗಿದ್ದು ಬಹುತೇಕ ಜನರ ಆದಾಯ ಕೃಷಿಪೂರಕ ಚಟುವಟಿಕೆಗಳಿದಲೇ ಬರುತ್ತದೆ. ಭಾರತವಂತೂ ಕೃಷಿ ಪ್ರಧಾನ ದೇಶವಾಗಿದ್ದು ಶೇಕಡಾ 70 ಜನ ಅದರ ಮೇಲೆಯೆ ಅವಲಂಬಿತರಾಗಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೈಗಾರಿಕೆ ಉದ್ಯಮದಲ್ಲಿ ಪ್ರಗತಿ ಸಾಧಿಸಿದ್ದರೂ ಕೂಡ ಕೃಷಿಯನ್ನು ಕಡೆಗಣಿಸಿಲ್ಲ.. ಏಕೆಂದರೆ ಶ್ರೀಮಂತ ರಾಷ್ಟ್ರವಿರಲಿ ಬಡ ರಾಷ್ಟ್ರವಿರಲಿ ಜನರ ಊಟದ ತಟ್ಟೆಗೆ ಆಹಾರ ರೈತನಿಂದಲೇ ಬರಬೇಕು.

ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು ರೈತ ಸಮುದಾಯ ಅತ್ಯಂತ ಮಹತ್ವಪೂರ್ಣ ಎಂದಾಗುತ್ತದೆ.. ಹಾಗಾದರೆ ಅವನು ಕೂಡ ಅಷ್ಟೇ ಸುಖಿಯಾಗಿ ಇರಬೇಕಾಗಿತ್ತು. ಆದರೆ ವಾಸ್ತವ ಹಾಗಿಲ್ಲ. ಇಂದು ಕೃಷಿಯನ್ನು ನಂಬಿದವನ ಜೀವನ ಹೇಗಿದೆ ಎಂದು ನೋಡಲು ದುರ್ಬೀನು ಬೇಕಾಗಿಲ್ಲ.
ಏಕೆ ಹೀಗಾಯಿತು? ಎಲ್ಲಿ ಎಡವಿದೆವು? ಈ ಹೀನಾಯ ಸ್ಥಿತಿಗೆ ಏನು ಕಾರಣ? ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ.. ಇದಕ್ಕೆ ಉತ್ತರ ನಮ್ಮಲ್ಲೇ ಸಿಕ್ಕೀತು ಎನಿಸುತ್ತದೆ..

ಮೊದಲು ಆಹಾರ ಧಾನ್ಯಗಳನ್ನು ಬೆಳೆಯುವುದಕ್ಕಷ್ಟೇ ಸೀಮಿತವಾಗಿದ್ದ ವ್ಯವಸಾಯ, ವಾಣಿಜ್ಯ ಬೆಳೆಗಳ ಪರಿಚಯವಾದ ನಂತರ ಅದರ ಸ್ವರೂಪವೇ ಬದಲಾಯಿತು ಎನ್ನಬಹುದು. ಹೆಚ್ಚು ಒಳಸುರಿ, ಹೆಚ್ಚು ನೀರು, ಹೆಚ್ಚು ಬೆಳೆ, ಹೆಚ್ಚು ಹಣ..ಹೀಗೆ ಎಲ್ಲದರಲ್ಲೂ ಹೆಚ್ಚುಗಾರಿಕೆ.. ಸುಖ, ನೆಮ್ಮದಿ ದೂರ ಸರಿದು ಹಣ ಗಳಿಸುವುದೇ ನಮ್ಮ ಗುರಿಯಾಯಿತು.. ಇದಕ್ಕೆ ಪೂರಕವೆಂಬಂತೆ ಕಾಡುಗಳ ಹನನ, ನೀರಿನ ಎರ್ರಾಬಿರ್ರಿ ಬಳಕೆ, ಜಲಮೂಲಗಳ ನಾಶ ಹೀಗೆ ಪ್ರಕೃತಿಯ ಮೇಲೆ ಮನುಷ್ಯ ಗದಾ ಪ್ರಹಾರ ಮಾಡುತ್ತಲೇ ಮುನ್ನಡೆದ..

ಆರ್ಥಿಕ ಉದಾರೀಕರಣದ ಪ್ರಭಾವ ಮಾರುಕಟ್ಟೆಯ ಮೇಲಷ್ಟೆ ಅಲ್ಲದೇ ಬದುಕಿನ ಪರಿಕಲ್ಪನೆಯನ್ನೇ ಬದಲಿಸಿತು. ಸುಸ್ಥಿರ ಕೃಷಿ ಕ್ರಮೇಣ ಹಿನ್ನೆಲೆಗೆ ಸರಿಯತೊಡಗಿತು.

90 ರ ದಶಕದಲ್ಲಿ ಜಾಗತೀಕರಣ, ಮುಕ್ತ ಮಾರುಕಟ್ಟೆಗೆ ದಾರಿ ಮಾಡಿ ಸಾಮಾಜಿಕ ಜೀವನದಲ್ಲಿ ಭಾರೀ ಬದಲಾವಣೆಗೆ ಕಾರಣವಾಯಿತು. ನೈತಿಕತೆ, ಮೌಲ್ಯಗಳು ತೆರೆಮರೆಗೆ ಸರಿದು, ಭೌತಿಕತೆಗೆ ಎಲ್ಲೆಡೆ ಮನ್ನಣೆ ದೊರೆಯತೊಡಗಿತು..

ಸಕಲ ಜೀವರಾಶಿಗೆ ದೈವದತ್ತವಾಗಿ ಲಭಿಸಿದ್ದ ಸಮಾನತೆಯ ಹಕ್ಕು ಅಳಿದು, ಮನುಷ್ಯನೇ ಪ್ರಕೃತಿಯ ಕೇಂದ್ರಬಿಂದು ಎಂದು ಭಾವಿಸತೊಡಗಿದನು.. ಅಲ್ಲಿಂದಲೇ ಸಂಕಷ್ಟಗಳ ಸರಮಾಲೆ ಸುರುವಾಯಿತು ಎನ್ನಬಹುದು.

ನಮ್ಮ ಭೂಮಿ ಒಂದು ಆಕಾಶಕಾಯ.. ಸಕಲ ಚರಾಚರ ವಸ್ತುಗಳು ಒಂದರ ಮೇಲೊಂದು ಅವಲಂಬಿತವಾಗಿವೆ. ಇದೊಂದು ವ್ಯವಸ್ಥೆ.. ಪ್ರತಿಯೊಂದರ ಅಸ್ತಿತ್ವ ಇನ್ನೊಂದರ ಮೇಲೆ ಪ್ರಭಾವ ಬೀರುತ್ತಿರುತ್ತದೆ.

ಅಮೇಜಾನ್ ಕೊಳ್ಳ ಭೂಮಂಡಲದ ಪುಪ್ಪುಸದಂತೆ ಕೆಲಸ ಮಾಡುತ್ತದೆ. ಅಲ್ಲಿ ಮಳೆಯಾಗಬೇಕಾದರೆ ಆಫ್ರಿಕಾದ ಸಹಾರಾ ಮರಭೂಮಿಯ ಮರಳಿನ ಕಣಗಳು ಹಾರಿ ಹೋಗಿ ಅಲ್ಲಿನ ಮೋಡಗಳಿಗೆ ತಾಗಬೇಕಂತೆ, ಅದ್ಭುತವಲ್ಲವೇ?

ದೂರದ ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟಿಸಿದರೆ ನಮ್ಮ ದೇಶದ ರಾಜಧಾನಿಯಲ್ಲಿ ವಾಯುಯಾನ ಸ್ಥಗಿತವಾಯಿತು. ಎತ್ತಣ ಮಾಮರ, ಎತ್ತಣ ಕೋಗಿಲೆ.. ಒಂದಕ್ಕೊಂದು ನಂಟು. ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳುತ್ತಿರುತ್ತದೆ.

ಅಭಿವೃದ್ಧಿಯ ಬೆನ್ನು ಹತ್ತಿ “ಹವಾಮಾನ ವೈಪರೀತ್ಯ” ಎಂಬ ಪೆಡಂಭೂತವನ್ನು ಆಹ್ವಾನಿಸಿದ್ದೇವೆ.. ಪರಿಣಾಮ ಸ್ವರೂಪ, ಅಕಾಲಿಕ ಮಳೆ, ಜಲಕ್ಷಾಮ, ನೆರೆಹಾವಳಿ ಮುಂತಾದ ನೈಸರ್ಗಿಕ ವಿಕೋಪಗಳು, ಕೃಷಿಯನ್ನು ಇನ್ನಷ್ಟು ಕಷ್ಟಕರ ಮಾಡಿವೆ.

ಇದಕ್ಕೆ ಉತ್ತರ ನಾವೇ ಹುಡುಕಬೇಕಾಗಿದೆ. ಪ್ರಕೃತಿಗೆ ವಿರುದ್ಧ ದಾರಿಯಲ್ಲಿ ಬಹುದೂರ ಸಾಗಿ ಬಂದಿದ್ದೇವೆ, ಹೀಗಾಗಿ ಒಂದೇ ಬಾರಿ ಪರಿಹಾರ ಸಿಗಲಿಕ್ಕಿಲ್ಲ. ನಿಸರ್ಗದ ತಾಳಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ. ಅದಕ್ಕೆ ಪೂರಕವಾಗಿಯೇ ನಾವು ನಮ್ಮ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರಬೇಕು.. ಈ ನಿಟ್ಟಿನಲ್ಲಿ ಸಮಗ್ರ ಕೃಷಿಯನ್ನು ಪರ್ಯಾಯವಾಗಿ ಕೈಗೊಳ್ಳುವುದು ಯೋಗ್ಯವಾಗಿದೆ.

ಏಕಬೆಳೆ ಪದ್ಧತಿಯನ್ನು ಕೈ ಬಿಡಬೇಕಾಗಿದೆ. ಮಣ್ಣು ಆರೋಗ್ಯಕರವಾಗಿ ಇರಬೇಕೆಂದರೆ ಅಲ್ಲಿ ಬೆಳೆ ವೈವಿಧ್ಯತೆ ಬೇಕೆ ಬೇಕು. ಅಂದರೆ ಸೂಕ್ಷ್ಮಾಣು ಜೀವಿಗಳು ಯಥೇಚ್ಛವಾಗಿದ್ದು ಮಣ್ಣನ್ನು ಸದಾ ಜೀವಂತವಾಗಿರಿಸುತ್ತವೆ. ಆಹಾರ ಧಾನ್ಯಗಳು, ಹಣ್ಣುಗಳು, ಜಾನುವಾರಿಗೆ ಮೇವು, ಮರ ಮುಟ್ಟುಗಳನ್ನು ನಮ್ಮ ಜಮೀನಿನಲ್ಲಿ ಬೆಳೆಯಬೇಕು. ಕೃಷಿತ್ಯಾಜ್ಯವನ್ನು ಸುಡದೇ ಮರಳಿ ಮತ್ತೇ ಮಣ್ಣಿಗೆ ಸೇರಿಸಬೇಕು. ಇದರಿಂದ ಸಾವಯವ ಇಂಗಾಲ ಹೆಚ್ಚಾಗಿ ಮಳೆ ನೀರು ಜಮೀನಿನಲ್ಲಿಯೇ ಇಂಗುವಂತಾಗುತ್ತದೆ. ಯಾವುದೇ ಕಾರಣಕ್ಕೂ ಮಳೆ ನೀರು ವ್ಯರ್ಥವಾಗಿ ಹರಿದು ಹೋಗಬಾರದು. ಇಳುಕಲಿಗೆ ಅಡ್ಡವಾಗಿ ಬದುಗಳ ನಿರ್ಮಾಣ, ಇಂಗುಗುಂಡಿಗಳು ಇದಕ್ಕೆ ಪರಿಹಾರವಾಗಬಲ್ಲವು. ಪರಂಪರಾಗತ ಕೃಷಿಯೊಂದಿಗೆ ಅರಣ್ಯ ಕೃಷಿಯನ್ನು ಅಳವಡಿಸಿಕೊಳ್ಳುವುದು ಅವಶ್ಯಕ.

ಈ ನಿಟ್ಟಿನಲ್ಲಿ ಯೋಚಿಸಿದರೆ, ಧಾರವಾಡದ ಸುತ್ತ ಮುತ್ತಲಿನ ಪ್ರದೇಶ, ಮಾವು ಬೆಳೆಗೆ ಅದರಲ್ಲೂ ಆಪೂಸ್ ಅಥವಾ ಆಲ್ಫಾನ್ಸೊ ಬೆಳೆಗೆ ಹೇಳಿಮಾಡಿಸಿದಂತಿದೆ. ಸೂಕ್ತವಾದ ಹವಾಮಾನ, ಮಣ್ಣು, ನೀರು ನಿಸರ್ಗದತ್ತವಾಗಿ ಲಭ್ಯವಿದೆ. ಆಪೂಸು ಮಾವಿನ ಹಣ್ಣಿಗೆ ಶತಮಾನದ ಇತಿಹಾಸವಿದೆ. ಅದರಂತೆ ಸರಕಾರದ “ಒಂದು ಜಿಲ್ಲೆ ಒಂದು ಉತ್ಪನ್ನ” ಯೋಜನೆಗೆ ಮಾವು ಧಾರವಾಡ ಜಿಲ್ಲೆಗೆ ಆಯ್ಕೆಯಾಗಿರುವುದು ಸ್ವಾಭಾವಿಕವಾಗಿದೆ.

“ಹಣ್ಣುಗಳ ರಾಜ” ಎಂದೇ ಕರೆಯಲ್ಪಡುವ ಮಾವು ಒಂದು ಉತ್ಕೃಷ್ಟ ತೋಟಗಾರಿಕೆ ಬೆಳೆಯಾಗಿದ್ದು ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಸಲ್ಪಡುತ್ತದೆ. ಆರೋಗ್ಯ ಮತ್ತು ರುಚಿ ಎರಡರಲ್ಲೂ ಇದು ಶ್ರೇಷ್ಠವಾಗಿದ್ದು ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಾ ಸಾಗುತ್ತಿದೆ. ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಸುಮಾರು 60,000 ಎಕರೆಯಲ್ಲಿ ಮಾವಿನ ವಿವಿಧ ತಳಿಗಳನ್ನು ಬೆಳೆಯಲಾಗುತ್ತಿದ್ದು ಅದರಲ್ಲಿ ವಿಶೇಷವಾಗಿ ಆಪೂಸ ಅಥವಾ ಅಲ್ಫಾನ್ಸೊ ಹೆಚ್ಚು ಕ್ಷೇತ್ರವನ್ನು ಹೊಂದಿದ್ದು ಉಳಿದ ತಳಿಗಳಿಗಿಂತ ಹೆಚ್ಚು ಜನಪ್ರಿಯವಾಗಿದೆ. ಉತ್ತರ ಕರ್ನಾಟಕದ ಮಾವಿನ ಬೆಳೆಯ ಇತಿಹಾಸ ಗಮನಿಸಿದರೆ ಸಾಕಷ್ಟು ಏಳು ಬೀಳುಗಳನ್ನು ಕಾಣಬಹುದು.

ಮೊದಲೆಲ್ಲ ಸೀಮಿತ ಮಾರುಕಟ್ಟೆಯ ಅವಕಾಶಗಳಿದ್ದಿದ್ದರಿಂದ ಖರ್ಚು ಕಡಿಮೆ ಇದ್ದು ಇಳುವರಿಯನ್ನು ಸ್ಥಳೀಯವಾಗಿ ಮಾರಿ ಅಲ್ಪ ಲಾಭದಲ್ಲಿಯೇ ಬೆಳೆಗಾರರು ಸಂತುಷ್ಟರಾಗುತ್ತಿದ್ದರು. ಕ್ರಮೇಣ ಮಾರುಕಟ್ಟೆಯ ವ್ಯಾಪ್ತಿ ವಿಸ್ತರಿಸಿ ದೂರದ ಊರುಗಳಲ್ಲದೇ ಮಹಾನಗರಗಳು ಮತ್ತು ಅಲ್ಲಿಂದ ಕೆಲ ವರ್ತಕರ ಮೂಲಕ ವಿದೇಶಗಳಿಗೂ ಮಾವು ರಪ್ತುಆಗಲು ಆರಂಭವಾಯಿತು. ನಂತರ ಇದು ಪ್ರಮುಖವಾಗಿ ಆದಾಯ ತರುವ ಬೆಳೆಯಾಗಿ ಬದಲಾಯಿತು.

ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ ಮತ್ತು ಮಾರುಕಟ್ಟೆ ಸಮಸ್ಯೆಗಳಿಂದಾಗಿ ರೈತರು ಬಳಲುತ್ತಿದ್ದು ತಮ್ಮ ತೋಟಗಳಲ್ಲಿ ಮಾವಿನ ಮರಗಳನ್ನು ಕಡಿಯಲು ಆರಂಭಿಸಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ ಹೆಚ್ಚುತ್ತಿರುವ ವ್ಯವಸಾಯ ಖರ್ಚು, ನುರಿತ ಕೂಲಿಕಾರರ ಕೊರತೆ, ಸರಕು ಸಾಗಾಣಿಕೆಯ ವೆಚ್ಚದಲ್ಲಿ ಏರಿಕೆ, ಹೊಸ ಹೊಸ ರೋಗಗಳ ಬಾಧೆ, ಶೀತಾಗಾರಗಳ ಕೊರತೆ ಇತ್ಯಾದಿ..

ಕೃಷಿ ಕ್ಷೇತ್ರ ಸದಾ ಸಂಘರ್ಷದಿಂದ ಕೂಡಿದ್ದು ರೈತರು ಕಾಲಕಾಲಕ್ಕೆ ಆಯಾ ಕಾಲಮಾನದ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಲೇ ಹೊಸ ಹೊಸ ದಾರಿಗಳ ಅನ್ವೇಷಣೆ ಮಾಡುತ್ತಲೇ ಇರುತ್ತಾರೆ. ಇದರ ಫಲ ಸ್ವರೂಪ ಎಂಬಂತೆ ಈ ಭಾಗದ ಮಾವು ಬೆಳೆಗಾರರು ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ದಿಶೆಯಲ್ಲಿ ಮಾಡಿದ ಕಾರ್ಯವೇನೆಂದರೆ ಸಂಘಟನೆ. ಸಮಸ್ಯೆಗಳನ್ನು ಏಕಾಂಗಿಯಾಗಿ ಎದುರಿಸುವುದಕ್ಕಿಂತ ಸಂಘಟಿತರಾಗಿ ಅವನ್ನು ಜಯಿಸುವುದೇ ಮೇಲು ಎಂದು ಮಾವು ಬೆಳೆಗಾರರ ಬಳಗವನ್ನು ರಚಿಸಿಕೊಂಡು ಸವಾಲುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸು ಕಾಣತೊಡಗಿದ್ದಾರೆ.

ಮಾವು ಬೆಳೆಗಾರರ ಬಳಗದ ವತಿಯಿಂದ “ಬೆಳೆಗಾರರಿಂದ ಬಳಕೆದಾರರಿಗೆ” ಎಂಬ ಧ್ಯೇಯ ವಾಕ್ಯದಡಿ, ಮಧ್ಯವರ್ತಿಗಳನ್ನು ತಪ್ಪಿಸಿ ತಾವೇ ಮಾರಾಟ ಮಾಡಲು ಆರಂಭಿಸಿದ್ದು ಒಂದು ಇತಿಹಾಸ. ಇದು ಇನ್ನೂ ವ್ಯವಸ್ಥಿತವಾಗಿ ನಡೆಯಬೇಕಾಗಿದೆ. ಮುಂದುವರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಬಳಗದ ಸಾಮೂಹಿಕ ಪ್ರಯತ್ನಗಳ ಫಲವಾಗಿ ರಾಜ್ಯ ಸರ್ಕಾರ, ಧಾರವಾಡದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಮಂಜೂರು ಮಾಡಿ 6 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಉತ್ತರ ಕರ್ನಾಟಕದ ಮಾವು ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಪ್ರಸ್ತುತ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ.

ಇತ್ತೀಚೆಗೆ ಧಾರವಾಡದಿಂದ ಮಾವಿನಹಣ್ಣಿನ ರಫ್ತು ಪ್ರಾರಂಭವಾಗಿದೆ. ಧಾರವಾಡ ಮಾವು ಬೆಳೆಗಾರರ ಬಳಗದ ಸಾಂಫಿಕ ಪ್ರಯತ್ನದ ಫಲವಾಗಿ ಹಿಂದಿನ ವರ್ಷ ಆಪೂಸ್ ಮಾವನ್ನು ಪ್ರಥಮ ಬಾರಿಗೆ ಸಿಂಗಪುರಕ್ಕೆ ರಫ್ತು ಮಾಡಲಾಯಿತು.

ಧಾರವಾಡ ಆಪೂಸ್ ಮಾವಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದ್ದು ಸ್ಥಳೀಯವಾಗಿ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ. ವಿಶೇಷವಾಗಿ ಹುಬ್ಬಳ್ಳಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಏರ್ ಕಾರ್ಗೋ ಸೌಲಭ್ಯವನ್ನು ಪ್ರಾರಂಭಿಸಿದರೆ ಅಗಾಧ ಪ್ರಮಾಣದಲ್ಲಿ ಹಣ್ಣನ್ನು ವಿದೇಶಗಳಿಗೆ ನೇರವಾಗಿ ಕಳಿಸಬಹುದಾಗಿದೆ. ಇದರಿಂದ ರೈತರ ಆದಾಯವು ಹೆಚ್ಚಾಗಿ ಅವರ ಜೀವನಮಟ್ಟ ಸುಧಾರಿಸುವುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಮೂಲಭೂತ ಸೌಕರ್ಯಗಳನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿ ಸರ್ಕಾರಕ್ಕೆ ಅಧಿಕ ವರಮಾನವನ್ನು ತಂದು ಕೊಡಬಲ್ಲರು.

ಈ ಸಂದರ್ಭದಲ್ಲಿ ಧಾರವಾಡದ ಮಾವು ಬೆಳೆಗಾರರ ಬಳಗವು ಕಾರ್ಯಪ್ರವೃತ್ತರಾಗಿದ್ದು ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಶೀಘ್ರದಲ್ಲಿ ಕಾರ್ಗೊ ಸೌಲಭ್ಯವನ್ನು ಪ್ರಾರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.

ಧಾರವಾಡದ ಆಪೂಸು ಮುಂದಿನ ತಲೆಮಾರಿಗೆ ಉಳಿಯಬೇಕೆಂದರೆ ನಾವು ಕಾರ್ಯತತ್ಪರರಾಗಲೇಬೇಕಾಗಿದೆ. ರೈತರು ವೈಯುಕ್ತಿಕವಾಗಿ ಯೋಚಿಸದೇ ಸಂಘಟಿತರಾಗಿ, ಕೃಷಿ ಸಮುದಾಯ ಎಂಬ ಪರಿಕಲ್ಪನೆಗೆ ಮರುಜೀವ ನೀಡಬೇಕಿದೆ. ಅದಕ್ಕಾಗಿ ಈ ಸಂಘಟನೆ.. ಸಂಘಟಿತರಾಗಿ ಪ್ರಯತ್ನಿಸಿದಾಗಲೇ ಅದಕ್ಕೊಂದು ಬಲ ಬಂದು ಯಶಸ್ಸು ನಮ್ಮದಾಗುತ್ತದೆ.

ಈ ನಿಟ್ಟಿನಲ್ಲಿ ನಮ್ಮ ಸಂಘಟನೆಯ ಆದ್ಯ ಪ್ರವರ್ತಕರು ಒಂದು ಭದ್ರ ಬುನಾದಿ ಹಾಕಿದ್ದಾರೆ.. ಅದನ್ನು ಉಳಿಸಿ ಬೆಳೆಸಿ ಮುನ್ನಡೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ನಾಲ್ಕೈದು ವರ್ಷಗಳಲ್ಲಿ ನಾವು ಸಾಧಿಸಿದ್ದು ಕಡಿಮೆಯೇನಲ್ಲ.

ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಮಾವು ಅಭಿವೃದ್ದಿ ಮಂಡಳಿಯ ಕಾರ್ಯವ್ಯಾಪ್ತಿಯನ್ನು ಆಪೂಸ್ ಮಾವಿನ ತವರುಮನೆ ಎನಿಸಿಕೊಳ್ಳುವ ಧಾರವಾಡದವರೆಗೆ ಹಿಗ್ಗಿಸಿದ್ದು ದೊಡ್ಡ ಸಾಧನೆ.. ಧಾರವಾಡದಲ್ಲಿ ಮಾವು ಅಭಿವೃಧ್ಧಿ ಕೇಂದ್ರ ಸ್ಥಾಪನೆಯಾಗಿ, ಅದಕ್ಕಾಗಿ ಒಬ್ಬ ಅಧಿಕಾರಿ ಸಮೇತ ನಾಲ್ಕು ಸಿಬ್ಬಂದಿ ನೇಮಕಗೊಂಡಿದ್ದಾರೆ.

“ಇಂಟಿಗ್ರೇಟೆಡ್ ಪ್ಯಾಕ್ ಹೌಸ್” ನಿರ್ಮಾಣಕ್ಕಾಗಿ 06 (ಆರು) ಕೋಟಿ ರೂಪಾಯಿ ಮಂಜೂರಾಗಿ ಕಟ್ಟಡ ನಿರ್ಮಾಣ ಆಗುತ್ತಿರುವುದು ಬಳಗದ ಪರಿಶ್ರಮಕ್ಕೆ ಸಾಕ್ಷಿ.. ಅಕ್ಟೋಬರನಲ್ಲಿ ರಾಷ್ಟ್ರೀಯ ಕಾರ್ಯಾಗಾರ ಹಮ್ಮಿಕೊಂಡು ನಾಸಿಕ್ ನ ಸಹ್ಯಾದ್ರಿ ಫಾರ್ಮ್ ನ ಮುಖ್ಯಸ್ಥ ಶ್ರೀ ವಿಲಾಸ್ ಶಿಂಧೆಯವರನ್ನು ಕರೆಸಿ 300 ರೈತರ ಸಮ್ಮುಖದಲ್ಲಿ 2 ದಿನ ಕಾರ್ಯಕ್ರಮ ನಡೆಸಿದ್ದು ಬಳಗದ ಮಹತ್ಸಾಧನೆ. ಇದರಿಂದ ನಮ್ಮ ಬಳಗದ ಚಟುವಟಿಕೆಗಳ ಬಗ್ಗೆ ಎಲ್ಲ ಕಡೆ ಸಂದೇಶ ಹೋಗಿ ಮಾವು ಮಾರಾಟಕ್ಕೆ ಸಂಬಂಧಪಟ್ಟವರು, ಇಲಾಖೆಗಳು ಧಾರವಾಡದ ಕಡೆ ಮುಖ ಮಾಡುವಂತಾಗಿದೆ.. ಮಾವು ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಮುoಬೈ, ದೆಹಲಿಯ ವರ್ತಕರು ನಮ್ಮ ಬಳಗವನ್ನು ಸಂಪರ್ಕಿಸುವಂತಾಗಿದೆ..

ಅಷ್ಟೇ ಅಲ್ಲದೇ ಗೋವಾ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದ ಮುಖ್ಯಸ್ಥರು ತಮ್ಮ ತಂಡದೊಂದಿಗೆ ಮಾವು ಅಭಿವೃದ್ದಿ ಕೇಂದ್ರಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವಾ ವಿಮಾನ ನಿಲ್ದಾಣದಿಂದ ರಫ್ತು ಮಾಡುವಂತೆ ಆಹ್ವಾನಿಸಿ ಹೋಗಿದ್ದಾರೆ.. ಕಾಲಕಾಲಕ್ಕೆ ಬಳಗದ ಸದಸ್ಯರು
ಕೃಷಿ ಅಧ್ಯಯನ ಪ್ರವಾಸ ಕೈಗೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡಿದ್ದಾರೆ.. ಇದೆಲ್ಲವೂ ಸಂಘಟನೆಯ ಫಲ..

ರೈತ ಏಕಾಂಗಿಯಾಗಿ ವ್ಯವಸ್ಥೆಯೊಂದಿಗೆ ಹೋರಾಡುವದು ಕಷ್ಟ. ಸಂಘಟಿತರಾಗಿ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸಿದರಷ್ಟೇ ಉಳಿಗಾಲ.

ಈ ಬಾರಿ ಕಾಯಿ ಕಚ್ಚುವ ಪ್ರಮಾಣ ಕಡಿಮೆಯಾಗಿ ಮಾವು ಬೆಳೆಗಾರರು ಚಿಂತೆಗೀಡಾಗಿರುವದು ಬೇಸರದ ವಿಷಯ.. ಈಗಾಗಲೇ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಜಂಟಿ ಅಧ್ಯಯನ ಮಾಡಿದ್ದಾರೆ.. ಪರಿಹಾರ ಹುಡುಕುತ್ತಾರೆಂಬ ಭರವಸೆ ತಾಳೋಣ.. ಹಾಗೆಂದು ನಾವು ತಲೆಮೇಲೆ ಕೈಹೊತ್ತು ಕುಳಿತರೆ ಪ್ರಯೋಜನವಿಲ್ಲ..

ಕೃಷಿ ಜೂಜಾಟವಿದ್ದಂತೆ. ನೆರಳು ಬಿಸಿಲಿನಾಟ.. ಉಳಿದಿರುವ ಅಲ್ಪ ಸ್ವಲ್ಪ ಬೆಳೆಯನ್ನು ಉಳಿಸಿಕೊಂಡು ಇಳುವರಿ ಪಡೆದರೆ ಉತ್ತಮ ಬೆಲೆ ಸಿಕ್ಕೀತು ಎಂಬ ಆಶಾಭಾವನೆ.. ಈ ಬಾರಿ ಇಲ್ಲವಾದರೆ ಮುಂದಿನ ಬಾರಿ ಬಂದೀತು.. ಜಗತ್ತು ಭರವಸೆಯ ಮೇಲೆ ನಿಂತಿದೆ.. ಯಾವುದೇ ಕಾರಣಕ್ಕೆ ಆತ್ಮವಿಶ್ವಾಸ ಕಳೆದುಕೊಳ್ಳುವದು ಬೇಡ. ಈ ಬಾರಿ ಇಳುವರಿ ಕಡಿಮೆ ಇದ್ದರೂ, ಸ್ವಲ್ಪ ಪ್ರಮಾಣದಲ್ಲಿ ಹಣ್ಣನ್ನು ಪರದೇಶಕ್ಕೆ ಕಳಿಸಿದರೆ ಈ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಹಣ್ಣು ಸಿಗುತ್ತದೆ ಎಂಬ ಸಂದೇಶ ಹೋಗುತ್ತದೆ.

ಬಳಗದ ಕಾರ್ಯಕಲಾಪಗಳಲ್ಲಿ ಹಿಂದೆಗೆತ ಬೇಡ.. ಇದನ್ನು ಮುಂದುವರಿಸಲೇಬೇಕಾಗಿದೆ.. ಯಾವುದೇ ನಕಾರಾತ್ಮಕ ಭಾವನೆ, ಸಂದೇಶಗಳಿಗೆ ಆಸ್ಪದ ಕೊಡುವದು ತರವಲ್ಲ. ತರಬೇತಿ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯ ಸಹಭಾಗಿತ್ವ ಇದ್ದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ.. ಧೈರ್ಯದಿಂದ ಮುಂದೆ ಸಾಗಿ ಬಳಗವನ್ನು ಒಂದು ಹಂತಕ್ಕೆ ಮುಟ್ಟಿಸೋಣ. ಉತ್ತರ ಕರ್ನಾಟಕದ ಮಾವು ಚರಿತ್ರೆಯಲ್ಲಿ ನಮ್ಮ ಕೊಡುಗೆ ಎದ್ದು ಕಾಣುವಂತಾಗಬೇಕು.. ಅಷ್ಟಕ್ಕೂ ಈಗಾಗಲೇ ಇತಿಹಾಸ ಸೃಷ್ಟಿಯಾಗಿದೆ.. ನಾವು ಅದರ ಭಾಗ ಆಗುವದು ಮಾತ್ರ ಬಾಕಿಯಿದೆ.

ಬಳಗದ ಧೇಯೋದ್ದೇಶಗಳು ಉದಾತ್ತವಾಗಿದ್ದು” ಸಮಷ್ಟಿಯೇ ಜೀವನ” ಎಂಬ ಸಿದ್ಧಾಂತದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರೆಲ್ಲರ ಅಭಿಪ್ರಾಯಗಳಿಗೆ ಕಿವಿಗೊಡುತ್ತಾ ಸಾಗಿದೆ.. ವಿಭಿನ್ನ ದಾರಿಗಳನ್ನು ಅನುಸರಿಸಿದರೂ ಎಲ್ಲರ ಉದ್ದೇಶ ಒಂದೇ ಆಗಿದ್ದು ಧಾರವಾಡ ಆಪೂಸ್ ಹಣ್ಣನ್ನು ಪುನರುಜ್ಜೀವನಗೊಳಿಸಿ ಬೆಳೆಗಾರರ ಹಿತಾಸಕ್ತಿಯನ್ನು ಕಾಯುವದೇ ಆಗಿದೆ. ಇದು ಎಲ್ಲರ ಕರ್ತವ್ಯ ಕೂಡ..

ಸೈನ್ಯದಲ್ಲಿ ತರಬೇತಿಯ ವೇಳೆ ತುಕಡಿಯೊಂದರಲ್ಲಿ(ಪ್ಲಾಟೂನ್) 24 ಜವಾನರು ಒಟ್ಟಿಗೆ ಓಡುತ್ತಿರುತ್ತಾರೆ..ಪ್ಲಾಟೂನ್ ನ ಮುಂಭಾಗ ಮತ್ತು ಹಿಂಭಾಗದಲ್ಲಿ ಚೆನ್ನಾಗಿ ಓಡುವವರಿದ್ದರೆ, ಮಧ್ಯದಲ್ಲಿ ನಿಧಾನ ಓಡುವವರನ್ನು ಹಾಕಿರುತ್ತಾರೆ.. ಮುಂದಿದ್ದವರು ಎಳೆದುಕೊಂಡು ಹೋದರೆ ಹಿಂದಿನವರು ನೂಕುತ್ತಿರುತ್ತಾರೆ..ಅವಶ್ಯಕತೆ ಬಿದ್ದರೆ ಹಿಂದುಳಿದವರನ್ನು ಹೆಗಲ ಮೇಲೆ ಹೊತ್ತು ಓಡುತ್ತಾರೆ.. ಉದ್ದೇಶ ಸ್ಪಷ್ಟ.. ಯಾರೂ ಹಿಂದೆ ಉಳಿಯಬಾರದು..

ಈ ನಿದರ್ಶನವನ್ನು ಜೀವನದ ಎಲ್ಲ ರಂಗಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ವಿಶೇಷವಾಗಿ ರೈತ ಸಮುದಾಯಕ್ಕೆ.. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ, ಸಂಘಟನೆ ಬಲಗೊಂಡು, ಅವಕಾಶ ವಂಚಿತರಿಗೂ ಮುಂದೆ ಬರಲು ಅನುವು ಮಾಡಿಕೊಡಬೇಕಾಗಿದೆ..

ಕೃಷಿಯ ಮಹತ್ವ, ಆಳ, ಅಗಲದ ಬಗ್ಗೆ ಪರಿಪೂರ್ಣವಾಗಿ ಹೇಳುವದು ಸುಲಭ ಸಾಧ್ಯವಲ್ಲ.. ಮೊಗೆದಷ್ಟು ಬಂಗಾರ ಎಂಬಂತೆ ಪ್ರಯೋಗ ಮಾಡಿದಷ್ಟು ಅನುಭವ.. ಹೊಸ ಪಾಠಗಳು ನಿತ್ಯ ನಿರಂತರ..

ಸದ್ಯಕ್ಕೆ ಧೈರ್ಯಗುಂದಿದಂತಿರುವ ಮಾವು ಬೆಳೆಗಾರರ ಮನೋಬಲ ಹೆಚ್ಚಿಸಬೇಕಾದುದು ಇವತ್ತಿನ ತುರ್ತು.. ಎಲ್ಲರ ಪ್ರಯತ್ನ ಫಲಿಸಿ, ಸೂಕ್ತ ಬೆಲೆ ಸಿಕ್ಕು ರೈತರ ಮುಖದ ಮೇಲೆ ಮತ್ತೆ ಮಂದಹಾಸ ಮೂಡಲಿ..

“ಬೆಳ್ಳಾನೆ ಎರಡೆತ್ತು, ಬೆಳ್ಳಿಯ ಬಾರುಕೋಲು..ಬಂಗಾರದ ಸೆಡ್ಡಿ ಬಲಗೈಲಿ..
ಬಂಗಾರದ ಸೆಡ್ಡಿ ಬಲಗೈಲಿ ಹಿಡಕೊಂಡು..
ಹೊನ್ನ ಬಿತ್ತೇವು ಹೊಲಕೆಲ್ಲ”..

ಎಂಬ ಜನಪದ ಮತ್ತೆ ರೈತ ಸಮುದಾಯದಲ್ಲಿ ಅನುರಣಿಸಲಿ ಎಂಬುದೇ ಮನದ ಆಶಯ..

— ನಾಗರಾಜ ತಿಮ್ಮಾಪೂರ.
ಮಾವು ಬೆಳೆಗಾರರ ಬಳಗ (ರಿ) ಧಾರವಾಡ.

Scroll to Top